ಬಿಜೆಪಿಯಲ್ಲಿ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಚಿಕ್ಕನಾಯಕನಹಳ್ಳಿ, ತುರುವೇಕೆರೆ ಹಾಗೂ ತುಮಕೂರು ಮಂಡಲಕ್ಕೆ ಅಧ್ಯಕ್ಷರ ಆಯ್ಕೆಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಪಕ್ಷ ಸಂಘಟನೆಯಲ್ಲಿ ಹಿಡಿತ ಸಿಕ್ಕಿಲ್ಲ ಎಂಬುದು ದೃಢವಾಗಿದೆ.
ಜೆ.ಸಿ.ಮಾಧುಸ್ವಾಮಿ ಅವರೊಂದಿಗೆ ಅಂತರ ಕಾಯ್ದುಕೊಂಡಿರುವ ಹಿರಿಯ ಮುಖಂಡ ಗೋಡೆಕೆರೆ ಎಂ.ಎಂ.ಜಗದೀಶ್ ಅವರನ್ನು ಚಿಕ್ಕನಾಯಕನಹಳ್ಳಿ ಮಂಡಲ ಅಧ್ಯಕ್ಷರಾಗಿ ನೇಮಕ ಮಾಡಿ ಬಿಜೆಪಿ ಜಿಲ್ಲಾಧ್ಯಕರು ಆದೇಶಿಸಿದ್ದು ಜೆಸಿಎಂ ಬಣಕ್ಕೆ ಹಿನ್ನಡೆಯಾಗಿದೆ. ತಾಲೂಕಿನಲ್ಲಿ ಬಿಜೆಪಿ ಕಟ್ಟಿ, ಬೆಳೆಸಿದವರಲ್ಲಿ ಪ್ರಮುಖ ಮುಖಂಡರಾಗಿರುವ ಜಗದೀಶ್ ಅವರು ಮಾಧುಸ್ವಾಮಿ ಅವರೊಂದಿಗೆ ಮೊದಲಿಂದಲೂ ಅಂತರ ಕಾಯ್ದುಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಕಿರಣ್‌ಕುಮಾರ್ ಅವರಿಗೆ ಟಿಕೆಟ್ ಕೊಡಿ ಎಂದು ಪಕ್ಷದ ಮುಖಂಡರಿಗೆ ನೇರವಾಗಿ ಹೇಳಿ ಮಾಧುಸ್ವಾಮಿ ಜತೆ ಮುನಿಸು ಮಂದುವರಿಸಿದ್ದರು.
ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಶಿಫಾರಸು ಮಾಡಿದ್ದ ಹೆಬ್ಬಾಕ ರವಿ ಅವರನ್ನು ಆಯ್ಕೆ ಮಾಡಿರಲಿಲ್ಲ, ಈಗ ತಾಲೂಕು ಅಧ್ಯಕ್ಷರ ಆಯ್ಕೆಯಲ್ಲಿಯೂ ಮಾಧುಸ್ವಾಮಿ ಮಾತು ನಡೆದಿಲ್ಲ ಎಂಬುದು ಸ್ಪಷ್ಟವಾಗಿದ್ದು, ಭವಿಷ್ಯದ ರಾಜಕೀಯ ಚಟುವಟಿಕೆಗಳು ಕುತೂಹಲ ಮೂಡಿಸಿವೆ.
ತುರುವೇಕೆರೆ, ತುಮಕೂರಲ್ಲಿ ಶಾಸಕರ ಮಾತಿಗೆ ಮಣೆ: ಚಿಕ್ಕನಾಯಕನಹಳ್ಳಿ ಮಂಡಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೆಡ್ಡು ಹೊಡೆದಿರುವ ಜಿಲ್ಲಾಧ್ಯಕ್ಷರು ತುಮಕೂರು ಹಾಗೂ ತುರುವೇಕೆರೆ ಮಂಡಲದಲ್ಲಿ ಶಾಸಕರ ಮಾತಿಗೆ ಮಣೆ ನೀಡಿದ್ದಾರೆ. ತುರುವೇಕೆರೆ ಮಂಡಲ ಅಧ್ಯಕ್ಷರಾಗಿ ಹೆಡಿಗೆಹಳ್ಳಿ ವಿಶ್ವನಾಥ್ ಹಾಗೂ ತುಮಕೂರು ಮಂಡಲ ಅಧ್ಯಕ್ಷರಾಗಿ ಟಿ.ಎಚ್.ಹನುಮಂತರಾಜು ಅವರನ್ನು ನೇಮಕ ಮಾಡಿದ್ದು ಸ್ಥಳೀಯ ಶಾಸಕರ ಮಾತಿಗೆ ಮಣೆ ಸಿಕ್ಕಿದೆ. ತುಮಕೂರು ಮಂಡಲ ಕಾರ್ಯದರ್ಶಿಗಳಾಗಿ ಕೆ.ರಾಜೀವ್ ಹಾಗೂ ಗಣೇಶ್ ಜಿ.ಪ್ರಸಾದ್ ಅವರನ್ನು ನೇಮಿಸಿ ಆದೇಶಿಸಲಾಗಿದೆ.
ಮಾಧುಸ್ವಾಮಿಗೆ ಪಕ್ಷ ಸಂಘಟನೆಯಲ್ಲಿ ಹಿಡಿತವಿಲ್ಲ: ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಮಂತ್ರಿಯೂ ಆಗಿರುವ ಜೆ.ಸಿ.ಮಾಧುಸ್ವಾಮಿ ಅವರಿಗೆ ಬಿಜೆಪಿ ಸಂಘಟನೆಯ ಮೇಲೆ ಹಿಡಿತವೇ ಸಿಕ್ಕಿಲ್ಲ ಎಂಬ ಮಾತು ಪಕ್ಷದ ವಲಯದಲ್ಲಿದೆ. ಜನತಾ ಪರಿವಾರ ಹಿನ್ನೆಲೆಯ ಜೆಸಿಎಂಗೆ ಬಿಜೆಪಿಯ ಒಳಹೊರಗೂ ತಿಳಿಯುತ್ತಲೂ ಇಲ್ಲ. ಹಾಗಾಗಿ, ಪಕ್ಷದ ಪದಾಧಿಕಾರಿಗಳ ಆಯ್ಕೆಯಲ್ಲಿ ಇವರ ಮಾತಿಗೆ ಮನ್ನಣೆ ಸಿಗುತ್ತಿಲ್ಲ, ಪಕ್ಷದಲ್ಲಿ ಮಾಧುಸ್ವಾಮಿ ಪ್ರಭಾವ ಕಡಿಮೆ ಎಂಬುದನ್ನು ಖಾತ್ರಿಪಡಿಸಿಕೊಂಡ ಭವಿಷ್ಯದ ಆಕಾಂಕ್ಷಿಗಳು ಬಣ ಬದಲಾಯಿಸುತ್ತಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಗೊಂದಲದ ಕಾರಣಕ್ಕೆ ನೇಮಕ ಆಗಿರಲಿಲ್ಲ: ಕೆಜೆಪಿ, ಬಿಜೆಪಿ ಬಣದ ಮುಖಂಡರ ನಡುವಿನ ಒಳಜಗಳದ ಕಾರಣಕ್ಕೆ ಚಿಕ್ಕನಾಯಕನಹಳ್ಳಿ, ತುರುವೇಕೆರೆ ಹಾಗೂ ತುಮಕೂರು ನಗರ ವಿಧಾನಸಭಾ ಮಂಡಲದ ಅಧ್ಯಕ್ಷರ ಆಯ್ಕೆ ನನೆಗುದಿಗೆ ಬಿದ್ದಿತ್ತು. ಚಿಕ್ಕನಾಯಕನಹಳ್ಳಿಯಲ್ಲಿ ಜೆಸಿಎಂ, ಕಿರಣ್‌ಕುಮಾರ್ ಬಣ, ತುರುವೇಕೆರೆಯಲ್ಲಿ ಮಸಾಲೆ ಜಯರಾಮ್ ಹಾಗೂ ಮೂಲ ಬಿಜೆಪಿ ಬಣ ಹಾಗೂ ತುಮಕೂರು ನಗರದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಸೊಗಡು ಶಿವಣ್ಣ ನಡುವಿನ ಬಣ ರಾಜಕೀಯಕ್ಕೆ ಆಯ್ಕೆ ತಡವಾಗಿತ್ತು.ಬಿಜೆಪಿ ಸಂಪ್ರದಾಯಕ್ಕೆ ವಿರುದ್ಧವಾಗಿ ಜಿಲ್ಲಾಧ್ಯಕ್ಷರ ಆಯ್ಕೆಯಾದ ನಂತರ ಈ ಮೂರು ಮಂಡಲದ ಅಧ್ಯಕ್ಷರ ಆಯ್ಕೆ ನಡೆದಿದ್ದು ಚಿಕ್ಕನಾಯಕನಹಳ್ಳಿ ಹೊರತುಪಡಿಸಿ ಉಳಿದೆಡೆ ಸ್ಥಳೀಯ ಶಾಸಕರ ಶಿಾರಸಿಗೆ ಮನ್ನಣೆ ಸಿಕ್ಕಿದೆ. ಶಾಸಕರಿಲ್ಲದ ಮಂಡಲಗಳಲ್ಲಿ ಪಕ್ಷ ನಿಷ್ಠರನ್ನು ಗುರುತಿಸಲಾಗಿದೆ

Comments
Post a Comment