ಕೋವಿಡ್ ಸಂದರ್ಭದಲ್ಲಿ ಕೋಮುವಾದಿ ರಾಜಕಾರಣಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅರಬಿಕ್ ವಿದ್ಯಾಸಂಸ್ಥೆಗೆ ಭೇಟಿ ನೀಡಿ ಧರ್ಮಗುರುಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಕ್ಕಾಗಿ ಕೆಲವರು ತಬ್ಲಿಘಿ ಮತ್ತು ಪಾದನಾರಾಯಣಪುರ ವಿಷಯವನ್ನು ದೊಡ್ಡದು ಮಾಡಿದರು.
ಒಂದೆರಡು ಸಣ್ಣಪುಟ್ಟ ತಪ್ಪುಗಳಿಗೆ ಕಾನೂನು ತನ್ನದೇ ಆದ ಕ್ರಮ ಜರುಗಿಸುತ್ತದೆ. ಅದನ್ನುಬಿಟ್ಟು ಒಟ್ಟಾರೆ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದ್ದು ಸರಿಯಲ್ಲ. ಕೋಮುವಾದಿ ರಾಜಕಾರಣಕ್ಕೆ ಕಾಂಗ್ರೆಸ್ ಅವಕಾಶ ಕೊಡುವುದಿಲ್ಲ ಎಂದರು.
ನಾನು ಜಾತ್ಯಾತೀತ ನಿಲುವುಗಳಲ್ಲಿ ರಾಜಕಾರಣ ಮಾಡಿಕೊಂಡು ಬಂದವನು. ನಮಗೆ ಎಲ್ಲಾ ಧರ್ಮಗಳ ಧರ್ಮವೂ ಮುಖ್ಯ. ಹಾಗಾಗಿ ಇಂದು ಅರೆಬಿಕ್ ಕಾಲೇಜಿನಲ್ಲಿ ಮುಸ್ಲಿಂ ಧರ್ಮಗುರುಗಳಾದ ಅಮೀರ್ ಇ ಶೆರಿಯತ್ , ಮುಫ್ತಿ ಸಗೀರ್ ಅಹಮ್ಮದ್ ಅವರುಗಳನ್ನು ಭೇಟಿ ಮಾಡಿದ್ದೇನೆ. ಅವರು ನನ್ನನ್ನು ಆಶೀರ್ವದಿಸಿದ್ದಾರೆ ಎಂದು ಹೇಳಿದರು.
ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟದ ಸಂದರ್ಭದಲ್ಲಿ ಧರ್ಮ ಮುಖ್ಯವಲ್ಲ. ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳು ಮುಖ್ಯ. ಎಲ್ಲ ಧರ್ಮಗಳು ತಮ್ಮದೇ ಆದ ಸೇವೆ ಸಲ್ಲಿಸಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Comments
Post a Comment