ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ ಕಸರತ್ತು ಅಂತ್ಯಗೊಳ್ಳುತ್ತಿದ್ದಂತೆಯೇ ಬಿಜೆಪಿಯ ರೆಬೆಲ್ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮತ್ತೊಮ್ಮೆ ಧ್ವನಿ ಎತ್ತತೊಡಗಿದ್ದಾರೆ.
ನಿನ್ನೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಅವರನ್ನು ಭೇಟಿ ಮಾಡಿರುವ ವಿಜಯಪುರ, ಧಾರವಾಡ, ಬೆಳಗಾವಿ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲ ಬಿಜೆಪಿ ಶಾಸಕರು ಬಿಎಸ್‍ವೈ ವಿರುದ್ಧ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನುದಾನದ ತಾರತಮ್ಯದ ನೆಪದಲ್ಲಿ ಅಧಿಕಾರ ವಂಚಿತ ಪಕ್ಷದ ಅತೃಪ್ತ ಶಾಸಕರು ಯಡಿಯೂರಪ್ಪನ ವಿರುದ್ಧ ಈಗ ತಿರುಗಿ ಬಿದ್ದಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ದೂರು ನೀಡಿದ್ದಾರೆ.
ಬಂಡಾಯ ಶಾಸಕರೆನ್ನಲಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ, ಅನಿಲ್ ಬೆನಕೆ ಸೇರಿದಂತೆ ಹಲವು ಶಾಸಕರು ಕಟೀಲ್‍ರನ್ನು ಭೇಟಿಯಾಗಿ ತಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಅನುದಾನ ನೀಡುತ್ತಿಲ್ಲ. ಅಧ್ಯಕ್ಷರು ಮಧ್ಯಪ್ರವೇಶಿಸಿ ಮುಖ್ಯಮಂತ್ರಿಯೊಂದಿಗೆ ಮಾತನಾಡಿ ಅನುದಾನ ಬಿಡುಗಡೆ ಮಾಡಲು ಒತ್ತಡ ಹಾಕುವಂತೆ ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ಮಾಡಬೇಕು. ತಮಗೂ ಮಂತ್ರಿಮಂಡಲದಲ್ಲಿ ಅವಕಾಶ ನೀಡಬೇಕು ಎಂದು ಬಂಡಾಯ ಶಾಸಕರು ಕೋರಿದ್ದಾರೆ. ಕ್ಷೇತ್ರಕ್ಕೆ ಅನುದಾನ ಬಿಡುಗಡೆಗಾಗಿ ಭಿನ್ನಮತೀಯ ಶಾಸಕರು ಬಿಜೆಪಿ ಅಧ್ಯಕ್ಷರನ್ನು ಮೇಲ್ನೋಟಕ್ಕೆ ಭೇಟಿ ಮಾಡಿರುವರಾದರೂ ಇದರ ಹಿಂದಿನ ಉದ್ದೇಶವೇ ಬೇರೆ ಇದೆ. ಸಿಎಂ ವಿರುದ್ದ ಸಿಡಿದೇಳಲು ಬಿಜೆಪಿಯ ಅತೃಪ್ತ ಶಾಸಕರು ಈಗಿನಿಂದಲೇ ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿಲ್ಲ. ಶಿವಮೊಗ್ಗಕ್ಕೆ ಅನುದಾನ ಸಿಗುತ್ತದೆ. ಆದರೆ, ನಮ್ಮ ಕ್ಷೇತ್ರಗಳಿಗೆ ದೊರೆಯುತ್ತಿಲ್ಲ. ನಾವು ಕ್ಷೇತ್ರದಲ್ಲಿ ಉತ್ತರಿಸಲು ಆಗುತ್ತಿಲ್ಲ. ನಮ್ಮ ಈ ಸಮಸ್ಯೆಯನ್ನೂ ಪರಿಹರಿಸಿ ಎಂದು ಮನವಿ ಸಲ್ಲಿಸಿದ್ದಾರೆ. ವಿಭಾಗವಾರು ಸಭೆ ಕರೆಯಬೇಕು.
ಶಾಸಕಾಂಗ ಪಕ್ಷದ ಸಭೆ ನಡೆಸಬೇಕು ಎಂದು ಕಟೀಲ್ ಮುಂದೆ ಬೇಡಿಕೆ ಇಟ್ಟಿರುವ ಶಾಸಕರು ಸುಮಾರು 1 ಗಂಟೆಗಳ ಕಾಲ ರಾಜ್ಯಾಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದು, ಅಂತಿಮವಾಗಿ ಸಿಎಂ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ, ಅಭಯ್ ಪಾಟೀಲ್, ಅನಿಲ್ ಬೆನಕೆ, ಜ್ಯೋತಿ ಗಣೇಶ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಅಮೃತ್ ದೇಸಾಯಿ ಸೇರಿದಂತೆ 10 ಶಾಸಕರು ಚರ್ಚೆಯಲ್ಲಿ ಭಾಗಿಯಾಗಿದ್ದರು. ಇಷ್ಟೆಲ್ಲ ನಡೆದಿರುವುದರ ಕೇಂದ್ರಬಿಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.
ರಾಜ್ಯಸಭಾ ಚುನಾವಣೆ ವೇಳೆ ಉಮೇಶ್ ಕತ್ತಿ ನಿವಾಸದಲ್ಲಿ ಭೋಜನಕೂಟದೊಂದಿಗೆ ಸಭೆ ನಡೆಸಿ ಶಾಸಕರ ತಂಡ ಕಟ್ಟಿಕೊಂಡು ಬಹಿರಂಗವಾಗಿಯೇ ಮುಖ್ಯಮಂತಿ ವಿರುದ್ಧ ಸಿಡಿದೆದ್ದಿದ್ದರು ಯತ್ನಾಳ್. ಇದೀಗ ಶಾಸಕರಾದ ಉಮೇಶ್ ಕತ್ತಿ ಹಾಗೂ ಮುರುಗೇಶ್ ನಿರಾಣಿ ಬಿಟ್ಟು ಹೊಸ ತಂಡವನ್ನು ಕಟ್ಟಿರುವಂತಿದೆ.
ನಿರಾಣಿಗೆ ಮೈ ಶುಗರ್ ಸಕ್ಕರೆ ಕಾರ್ಖಾನೆ, ಉಮೇಶ್ ಕತ್ತಿಗೆ ಸಚಿವ ಸ್ಥಾನದ ಭರವಸೆ ನೀಡಿದ್ದರಿಂದ ಉಭಯ ನಾಯಕರು ಸದ್ಯಕ್ಕೆ ಬಂಡಾಯದ ಬಾವುಟ ಕೆಳಗಿಳಿಸಿದ್ದಾರೆ. ಹೀಗಾಗಿ ಯತ್ನಾಳ್ ಈ ಇಬ್ಬರು ನಾಯಕರ ಬಿಟ್ಟು ಮತ್ತೊಂದು ತಂಡ ಕಟ್ಟಿಕೊಂಡು ಮುಖ್ಯಮಂತ್ರಿಯಡಿಯೂರಪ್ಪ ವಿರುದ್ಧ ಸಿಡಿದೇಳಲು ಹೊರಟಿದ್ದಾರೆ ಎನ್ನಲಾಗುತ್ತಿದೆ.
ಸದ್ಯದ ಮಟ್ಟಿಗೆ ಇದು ಅನುದಾನ, ಕ್ಷೇತ್ರದ ಕೆಲಸ ಕಾರ್ಯಗಳಿಗೆ ಸೀಮಿತ ಬೇಡಿಕೆಯಾಗಿರುವ ಕಾರಣ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಕ್ಷೀಣವಾಗಿದೆ. ಆದರೂ ಬಂಡಾಯದಂತಹ ಚಟುವಟಿಕೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ವರನ್ನು ಭೇಟಿ ಮಾಡುವ ಮುನ್ನ ಶಾಸಕರೊಬ್ಬರ ಮನೆಯಲ್ಲಿ ಸಭೆ ಸೇರಿ ಚರ್ಚಿಸಿ ನಂತರವೇ ಬಿಜೆಪಿ ಕಚೇರಿಗೆ ತೆರಳಿದ್ದಾರೆ. ಈ ಹಿಂದೆ ಉಮೇಶ್ ಕತ್ತಿ ನಿವಾಸದಲ್ಲಿ ಸಭೆ ಸೇರುತ್ತಿದ್ದರು. ಆದರೆ, ಈಗ ಯಾರ ನಿವಾಸದಲ್ಲಿ ಸಭೆ ಸೇರಿದ್ದರು ಎಂಬುದು ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ಶಾಸಕರು ಮತ್ತೊಂದು ಸುತ್ತಿನ ಬಂಡಾಯವೇಳುವ ಸಾಧ್ಯತೆ ಹಿನ್ನೆಲೆ ಕಟೀಲ್ ಇದೀಗ ಸಿಎಂ ಜೊತೆ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ. ಆದರೂ ಮುಂದೆ ಯತ್ನಾಳ್ ನೇತೃತ್ವದ ರೆಬೆಲ್ ಚಟುವಟಿಕೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ

Comments
Post a Comment