ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವವರ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜಕೀಯದ ಆನೆಕ ಖ್ಯಾತನಾಮರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆದ ಬಾಹುಬಲಿ ಯ ನಾಯಕ ನಟ ಪ್ರಭಾಸ್ ಬಿಜೆಪಿಯಿಂದ ಮುಂದಿನ ಲೋಕಸಭಾ ಚುನಾವಣೆಗೆ ಆಭ್ಯರ್ಥಿಯಾಗಲಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.
ರಾಜಕೀಯ ರಂಗಕ್ಕೆ ಬಾಹುಬಲಿ ಎಂಟ್ರಿಯಾಗುತ್ತಿರುವುದರಿಂದ ಬಿಜೆಪಿಗೆ ನಿಜವಾದ ಬಲ ಬರುವುದರ ಜೊತೆಗೆ ತೆಲುಗು ರಾಜ್ಯದ ರಾಜಕೀಯ ಲೆಕ್ಕಾಚಾರಗಳು ಬದಲಾಗಲಿದೆ ಎಂಬ ಚರ್ಚೆಗಳು ಶುರುವಾಗಿದೆ. ಬಾಹುಬಲಿ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆದ ಸಿನಿಮಾ. ಬಾಹುಬಲಿ ಸಿನಿಮಾದ ಮೂಲಕ ಪ್ರಭಾಸ್ ಭಾರತದ ಖ್ಯಾತ ನಟರಾಗಿ ಗುರುತಿಸಿಕೊಂಡರು ಮಾತ್ರವಲ್ಲದೆ ಪ್ರಭಾಸ್ ರ ಈ ಬಾಹುಬಲಿ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸುದ್ದಿಯಾಗಿತ್ತು.
ಪ್ರಭಾಸ್ ಕುಟುಂಬ ಹಾಗೂ ರಾಜಕೀಯಕ್ಕೆ ವರ್ಷಗಳ ನಂಟು ಇದೆ. ಪ್ರಭಾಸ್ ಅವರ ದೊಡ್ಡಪ್ಪ ಕೃಷ್ಣಂರಾಜು ಈ ಹಿಂದೆ ಬಿಜೆಪಿ ನಾಯಕರಾಗಿ ಕೇಂದ್ರ ಸಚಿವರೂ ಆಗಿದ್ದರು. ಕಾಕಿನಾಡ -ನರಸಾಪುರ ಕ್ಷೇತ್ರದಿಂದ 2 ಬಾರಿ ಲೋಕಸಭೆಗೆ ಚುನಾಯಿತರಾಗಿದ್ದ ಕೃಷ್ಣಂರಾಜು ವಾಜಪೇಯಿ ಸಂಪುಟದಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅದರೆ 2009 ರಲ್ಲಿ ಚಿರಂಜೀವಿ ಸ್ಥಾಪಿಸಿದ್ದ ಪ್ರಜಾರಾಜ್ಯಂ ಪಕ್ಷ ಸೇರಿದ ಕೃಷ್ಣಂರಾಜು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ದೇಶದ ರಾಜಕೀಯದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಅದೇ ರೀತಿ ಪ್ರಭಾಸ್ ತೆಲುಗು ಚಿತ್ರರಂಗದ ಪ್ರಭಾವಿ ನಾಯಕರಾಗಿದ್ದು, ಇವರಿಬ್ಬರು ಒಟ್ಟಾಗಿ ಪ್ರಚಾರ ನಡೆಸಿದರೆ ಬಿಜೆಪಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹೆಚ್ಚಿನ ಸ್ಥಾನಗಳು ಸಿಗುವ ನಿರೀಕ್ಷೆ ಹೆಚ್ಚಾಗಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.
ಕೃಷ್ಣಂರಾಜು ಅವರಿಗೆ ರಾಜ್ಯಪಾಲ ಹುದ್ದೆ ನೀಡುವ ಭರವಸೆ ನೀಡಿರುವ ಮೋದಿ, ಪ್ರತಿಯಾಗಿ ಪ್ರಭಾಸ್ ಅವರನ್ನು ಬಿಜೆಪಿಗೆ ಕರೆತರಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಮೋದಿ ಎಂದರೆ ಪ್ರಭಾಸ್ ಅವರಿಗೂ ಇಷ್ಟ. ಈ ಹಿಂದೆ ಮೋದಿ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ನಾನು ಮೋದಿ ಅವರ ಅಭಿಮಾನಿಯಾಗಿದ್ದೇನೆ ಎಂದು ಪ್ರಭಾಸ್ ಹೇಳಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಪವನ್ ಕಲ್ಯಾಣ್ ಬೆಂಬಲ ನೀಡಿದ್ದರಿಂದ ಪ್ಲಸ್ ಪಾಯಿಂಟ್ ಆಗಿತ್ತು. ಈಗ ಪವನ್ ಕಲ್ಯಾಣ್ ಮೋದಿ ವಿರುದ್ಧ ತಿರುಗಿಬಿದ್ದಿದ್ದಾರೆ.
ಪ್ರಭಾಸ್ ಅವರನ್ನು ರಾಜಕೀಯಕ್ಕೆ ಕರೆ ತಂದರೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ರಾಜಕೀಯ ಲೆಕ್ಕಾಚಾರಗಳು ಬದಲಾಗಲಿವೆ ಎಂಬುದನ್ನು ಮನಗಂಡಿರುವ ಮೋದಿ, ಪ್ರಭಾಸ್ ಅವರನ್ನೇ ಸಂಸತ್ ಚುನಾವಣೆಯಲ್ಲಿ ಕಣಕ್ಕಿಳಿಸಲು ಚಿಂತಿಸಿದ್ದಾರೆ. ಆದರೆ ಪ್ರಭಾಸ್ ಚುನಾವಣೆಗೆ ಸ್ಪರ್ಧಿಸುವುದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಸ್ಪರ್ಧಿಸದಿದ್ದರೂ, ಬಿಜೆಪಿ ಪರವಾಗಿ ಅವರು ಪ್ರಚಾರ ನಡೆಸುವುದಂತೂ ಗ್ಯಾರಂಟಿ ಎಂದು ಹೇಳಲಾಗಿದೆ.

Comments
Post a Comment